ಆ ದಿನ ಅಕ್ಟೋಬರ್ 26, 2009 ಸಂಜೆ 4 ಗಂಟೆಗೆ ಬಿ.ಎಮ್.ಟಿ.ಸಿ. ಬಸ್ನಲ್ಲಿ ಮೆಜಸ್ಟಿಕ್ ಕಡೆಗೆ ಹೊಗ್ತಾ ಇದ್ದೆ. ಯಮ, ಬದಲಾಗುತ್ತಿರುವ ಹೊಸ ಪ್ರಪಂಚಕ್ಕಾಗಿ ಅಪ್‌ಗ್ರೇಡ್ ಮಾಡಿಕೊಂಡಿರೊ ಹೊಸ ವಾಹನ ಈ ಬಿ.ಎಮ್.ಟಿ.ಸಿ. ಬಸ್ಸುಗಳು(ತನ್ನ ಹಳೆಯ ಕೋಣದ ಬದಲಾಗಿ). ಅದಕ್ಕೇ ವಾರಕ್ಕೆ ಒಂದಾದ್ರೂ ಬಲಿ ಬೀಳ್ತಾನೇ ಇರತ್ತೆ. ಪಾಪ ಅದು ನಿಜಾನೆ . ಈ ಕಾಲದಲ್ಲೂ ಕೋಣ ಹತ್ತಿ ಪ್ರಾಣ ಪಕ್ಷಿಯನ್ನು ಬೆನ್ನಟ್ಟಿ ಒನ್ ವೇ, ನೋ ಎಂಟ್ರಿ, ಮೆಟ್ರೊ ಕಾಮಗಾರಿ ಎಲ್ಲಾ ದಾಟಿ ಬರೋದ್ರೊಳಗೆ, ಯಮನಿಗೇ ಚೆಳ್ಳೆ ಹಣ್ಣು ತಿನ್ಸಿ ಬಿ.ಎಮ್.ಟಿ.ಸಿ. ಬಸ್‌ನಲ್ಲಿ ತಪ್ಪಿಸ್ಕೊಬಹುದು ಅಲ್ವಾ? ಅದಕ್ಕೇ ಇರಬೇಕು ಚಿತ್ರಗುಪ್ತ ಯಮನಿಗೆ ಈ ಐಡಿಯ ಕೊಟ್ಟಿದ್ದು.
ನನ್ನ ಮೊಬೈಲ್ "ಹೂವಿನಾ ಬಾಣದಂತೆ.." ಎಂದು ಹಾಡುತ್ತಾ, ತೂಕಡಿಸುತ್ತಿದ್ದ ನನ್ನನ್ನು ಎಬ್ಬಿಸಿತು. ಯಾರಪ್ಪಾ ಇದು, ಯಮನ ವಾಹನದಲ್ಲೂ ಸರಿಯಾಗಿ ತೂಕಡಿಸಕ್ಕೆ ಬಿಡಲ್ಲ ಅಂತ ಕಾಲ್ ರಿಸೀವ್ ಮಡಿದೆ. "ಏನೋ ಲೋಫರ್, ಏನ್ ಮಾಡ್ತಾ ಇದಿಯಾ.." ಎಂದು ಚಿರಪರಿಚಿತ ಧ್ವನಿ ಮತಾಡಿತು. ನನಗೆ ತಕ್ಷಣ ತಿಳೀತು, ಇದು ನನ್ನ "ಪ್ರಾಣ ಸ್ನೇಹಿತ" (ಅವನು ಹೇಳಿದ್ದು ಕೇಳದಿದ್ದರೆ ಪ್ರಾಣ ತಿಂತಾನೆ, ಅದಕ್ಕೇ "ಪ್ರಾಣ ಸ್ನೇಹಿತ" ಅಂದೆ) ಸುನಿಲ ಮತಾಡ್ತಾ ಇದಾನೆ ಅಂತ. ನಾನು "ಬಿ.ಎಮ್.ಟಿ.ಸಿ. ಬಸ್ನಲ್ಲಿ ಮೆಜಸ್ಟಿಕ್ ಕಡೆಗೆ ಹೊಗ್ತಾ ಇದೀನಲೇ. ಇವತ್ತು ದಾವಣಗೆರೆಗೆ ಹೋಗ್ಬೇಕಲ್ವಾ" ಅಂದೆ. ಅವನು "ಲೇ ನಾನು, ಪಿನ್ನಿ ಇಲ್ಲೇ ಮೇಕ್ರಿ ಸರ್ಕಲ್ ಹತ್ರ ಕಯ್ತಾ ಇರ್ತಿವಿ. ಇವತ್ತು ನನ್ನ ಹೊಸ ಕಾರ್ ಐ ೧೦ ಡೆಲಿವರಿ ಕೊಡ್ತಾರೆ. ಅದ್ರಲ್ಲೇ ಮೂರೂ ಜನ ದಾವಣಗೆರೆಗೆ ಹೋಗಣ. ಇಲ್ಲೇ ಬಾರಲೇ.." ಅಂದ. ಇದೇನಪ್ಪಾ ಗ್ರಹಚಾರ, ಇವನಿಗೆ ಕಾರ್ ಓಡಿಸಕ್ಕೆ ಬೇರೆ ಬರಲ್ಲ ಅಂತ ಮನಸಿನಲ್ಲೇ ಅಂದುಕೊಂಡೆ. ಒಬ್ಬ ಡ್ರೈವರ್ ನಮ್ಮ ಜೊತೆ ಬರ್ತಾ ಇದಾನೆ ಅಂತ ಗೊತ್ತಾದಮೇಲೆ "ಸರಿ, ಬರ್ತೀನಿ" ಅಂತ ಆ ಕಡೆಗೆ ಹೊರಟೆ.
ಹೊಸದಾಗಿ ಸಿಂಗರಿಸಿದ ಕಾರು ನೋಡಿ ತುಂಬ ಖುಷಿ ಆಯ್ತು. ಸೇಲ್ಸ್ ಎಕ್ಸಿಕ್ಯುಟಿವ್ ಕಾರ್ ಬಗ್ಗೆ ಸುನಿಲನಿಗೆ ವಿವರಿಸುತ್ತಾ ಇದ್ದ. ಸರಿ ಎಲ್ಲಾ ರೆಡಿ ಆಗಿ, ಆ ಅಂಗಡಿಯ ಹುಡುಗಿಯೊಬ್ಬಳು ಕಾರಿಗೆ ಪೂಜೆ ಮಾಡಿ ನಸುನಗುತ್ತಾ ಹೊಸ ಕಾರು ಕೊಂಡದಕ್ಕೆ ಅಭಿನಂದಿಸಿದಳು. ಆಗ ನಮ್ಮ ಸುನಿಲ ಇಂಗ್ಲೀಷ್‌ನಲ್ಲಿ "ನೋ ಮೆನ್ಷನ್. ಇಟ್ಸ್ ಮೈ ಪ್ಲೆಷರ್" ಅಂದ. ಹೊಸಾ ಕಾರು, ಪೂಜೆ ಮಾಡಿದ್ ಕೂಡ್ಲೇ ಸುನಿಲನಿಗೆ ಹುಡುಗಿ ಅಭಿನಂದಿಸಿದಾಗಲೇ ಅಂದುಕೊಂಡೆ, ಇವತ್ತು ಎನೊ ಗ್ರಹಚಾರ ಕಾಯ್ತಾ ಇದೆ ನಮಿಗೆ ಅಂತ. ಹೊಸ ಕಾರಿನಲ್ಲಿ ಹೊರಟಾಗ ರಾತ್ರಿ 7.30. ಆವತ್ತು ಸಂಕಷ್ಟ ಚೌತಿ, ಎಲ್ಲಾ ವಿಘ್ನೇಶ್ವರನ ದೇವಸ್ಥಾನಗಳೂ ತುಂಬಾ ಬ್ಯುಸಿ. ಎಲ್ಲರ ಕಷ್ಟಗಳನ್ನು ನಿವಾರಿಸಲು ಹೋದ ವಿಘ್ನೇಶ್ವರ, ನಮ್ಮ ಹೊಸಾ ಕಾರಿನ ಪೂಜೆಯನ್ನು ಸ್ವೀಕರಿಸುವುದಕ್ಕೆ, ನಾವು ಗೊರಗುಂಟೆ ಪಾಳ್ಯದ ದೇವಸ್ಥಾನದವರೆಗೊ ಬರಬೇಕಾಯಿತು. ಅಲ್ಲಿ ಪೂಜೆಗೆ ಹೂವು ತರಲು ಹೋದ ಸುನಿಲ,ದೊಡ್ಡದೊಂದು ಟೋಪಿ ಹಾಕಿಸಿಕೊಂಡು 80 ರುಪಾಯಿ ಕೊಟ್ಟು ಸ್ವಲ್ಪ ಹೂವು, ಕರ್ಪೂರ ತಂದ. ಪೂಜೆ ಮುಗಿಸಿ ನಮ್ಮ ಪ್ರಯಾಣ ದಾವಣಗೆರೆಗೆ ಶುರು ಆಯಿತು.
ಹೊಸದಾಗಿ ಕಾರ್ ಡೆಲಿವರಿ ಮಾಡಿದಾಗ ಅದರಲ್ಲಿ ಬರಿ 5 ಲೀಟರ್ ಪೆಟ್ರೋಲ್ ಇತ್ತು. ಬೆಂಗಳೂರು ಬಿಟ್ಟಮೇಲೆ ಹಾಕಿಸಿದರಾಯಿತು ಅಂತ ಡ್ರೈವರ್ ಹೇಳಿದಾಗ ಓಕೆ ಅಂತ ಸುನಿಲ ತಲೆ ಅಲ್ಲಾಡಿಸಿದ. ನಾನು ಮತ್ತು ಪಿನ್ನಿ ಸುನಿಲನಿಗೆ ಯಾವುದಾದ್ರು ಡಾಬಾದಲ್ಲಿ ಪಾರ್ಟಿ ಕೊಡ್ಸು ಅಂತ ತಲೆ ತಿನ್ನಕ್ಕೆ ಶುರು ಮಾಡಿದ್ವಿ. ಅವನೂ ಹೊಸ ಕಾರ್ ತೊಗೊಂಡಿದ್ದರ ಹುರುಪಿನಲ್ಲಿ ಪಾರ್ಟಿ ಕೊಡಿಸಕ್ಕೆ ಒಪ್ಪಿದ್ದ. ಬೆಂಗಳೂರು ಬಿಟ್ಟು ಹೊರ ಬಂದಮೇಲೆ ಯಾವುದೋ ಹಳ್ಳಿಯ ಬಳಿ ಪೆಟ್ರೋಲ್ ಬಂಕಲ್ಲಿ ಕಾರ್ ನಿಲ್ಲಿಸಿದಾಗ ಸುನಿಲ ತನ್ನ ಸಿಟಿ ಬ್ಯಾಂಕ್ ಪ್ಲಾಟಿನಮ್ ಕ್ರೆಡಿಟ್ ಕಾರ್ಡ್ ತೊಗೋತಾರಾ ಅಂತ ವಿಚಾರಿಸಿದ. ನಾವು ಅವನ ತಲೆಗೆ ಒಂದು ಬಿಟ್ಟು "ಹಳ್ಳಿನಲ್ಲಿ ಯಾವನಾದ್ರೂ ಕ್ರೆಡಿಟ್ ಕಾರ್ಡ್ ತೊಗೊತನೇನಲೇ, ದುಡ್ಡು ಕೊಡು" ಅಂತ ಕೇಳಿದ್ದಕ್ಕೆ, "ನನ್ನತ್ರ ದುಡ್ಡು ಇಲ್ಲಮ್ಮಾ.." ಅನ್ನೋದೇ? ಹಂಗೆ ಪೆಟ್ರೋಲ್ ಬಂಕ್ ಆದ್ಮೇಲೆ ಪೆಟ್ರೋಲ್ ಬಂಕ್ ಸುತ್ತಿ ಸುತ್ತಿ ಸಾಕಾಯ್ತು. ನಮ್ಮ ದುರಾದ್ರುಷ್ಟಕ್ಕೆ ಎಲ್ಲಿ ಕ್ರೆಡಿಟ್ ಕಾರ್ಡ್ ತೊಗೊತಾರೊ ಅಲ್ಲಿ ಪೆಟ್ರೋಲ್ ಇಲ್ಲ, ಎಲ್ಲಿ ಪೆಟ್ರೋಲ್ ಇದಿಯೋ ಅಲ್ಲಿ ಕ್ರೆಡಿಟ್ ಕಾರ್ಡ್ ತೊಗೊಳಲ್ಲ. ದೂರ ಸಾಗಿದಷ್ಟೂ ಕಾರಿನ ಪೆಟ್ರೋಲ್ ಖಾಲಿ ಆಗ್ತಾ ಇತ್ತು, ಹಾಗೆ ನಮ್ಮ ಡಾಬಾದ ಪಾರ್ಟಿ ಆಸೆ ಕೂಡಾ ಆಸೆಯಾಗೇ ಉಳಿಯತ್ತೇನೋ ಅನ್ನಿಸಕ್ಕೆ ಶುರು ಆಯ್ತು. ನಮಗೂ ಕಾರ್ಡ್ ತೊಗೊತೀರಾ ಅಂತ ಕೇಳಿ ಕೇಳಿ ಸಾಕಾಗಿ ಮುಂದಿನ ಬಂಕಲ್ಲಿ ಕಾರ್ಡ್‌ನ ಪೆಟ್ರೋಲ್ ಹಾಕುವವನ ಕೈಗೆ ಕೊಟ್ವಿ. ಅವನಿಗೆ ಕತ್ತಲಲ್ಲಿ ಸರಿಯಾಗಿ ಕಾಣಿಸದೆ "ಸಾರ್ ಇದು ವಿಜಿಟಿಂಗ್ ಕಾರ್ಡಾ ?" ಕೇಳಿದಕ್ಕೆ, ನಾವು "ಅಣ್ಣಾ ನಮಸ್ಕಾರ.. ನೆಕ್ಟ್ ಟೈಮ್ ಬರ್ತಿವಿ" ಅಂತ ಹೇಳಿ ಮತ್ತೇನೂ ಮತಾಡದೆ ಮುಂದೆ ನಡೆದೆವು.
ಓ, ಇದ್ಯಾಕೋ ಸರಿಹೋಗ್ತಿಲ್ಲಾ ಅಂತ ನಾನು, ಪಿನ್ನಿ ನಮ್ಮ ಹತ್ರ ಇದ್ದ 800 ರುಪಾಯಿ ಜೋಡಿಸಿ ಪೆಟ್ರೋಲ್ ಹಾಕಿಸಿದ್ವಿ. ಅಷ್ಟೊತ್ತಿಗೆ ರಾತ್ರಿ 10 ಗಂಟೆ. ಮುಂದೆ ತುಮಕೂರು ರಸ್ತೆಯಲ್ಲಿ ಟೋಲ್ ಫೀ ಕೊಟ್ಟು, 65 ರುಪಾಯಿ ದುಡ್ಡು ಉಳಿದಿತ್ತು. ಕಾರಿನ ಪೆಟ್ರೋಲ್ ಹಸಿವು ಸದ್ಯಕ್ಕೆ ತೀರಿ, ನಮ್ಮ ಹೊಟ್ಟೆ ಹಸಿವು ಶುರು ಆಗಿತ್ತು. ನಮ್ಮ ಡಾಬಾದ ಪಾರ್ಟಿ ಕೊನೆಗೆ ಕ್ಯಾತಸಂದ್ರದ ತಟ್ಟೆ ಇಡ್ಲಿ ಹೋಟೆಲಿನಲ್ಲಿ ಅಂತ ಡಿಸೈಡ್ ಮಾಡಿ, ಪವಿತ್ರಾ ಇಡ್ಲಿ ಹೋಟೆಲ್ ಒಳ ಹೋದ್ವಿ. ಡ್ರೈವರ್ ಸೇರಿ 4 ತಟ್ಟೆ ಇಡ್ಲಿ ಆರ್ಡರ್ ಮಾಡಿದ್ವಿ. ಹೊಟ್ಟೆ ಹಸಿವು ಸಿಕ್ಕಾಪಟ್ಟೆ ಇದ್ದಿದ್ರಿಂದ ಬೇಗ ಬೇಗ ತಿಂದು ಮುಗಿಸಿ, ಇನ್ನೊಂದು ಪ್ಲೇಟ್ ಆರ್ಡರ್ ಮಾಡಬೇಕು ಅನ್ನಿಸಿತು. ಆಮೇಲೆ ಸಿಕ್ಕಾಪಟ್ಟೆ ತಿಂದು ಬಿಲ್ ಕೊಡಕ್ಕೆ ದುಡ್ಡು ಇಲ್ಲದಲೆ, ನಾಲ್ಕೂ ಜನ ಇಡ್ಲಿ ಹಿಟ್ಟು ರುಬ್ಬೋ ಸೀನ್ ಕಣ್ಣು ಮುಂದೆ ಬಂತು...
..."ಲೇ..ಸುನಿಲ.. ಬಡ್ಡೀಮಗನೇ.. ನಾಲ್ಕೂವರೆ ಲಕ್ಷದ ಹೊಸ ಕಾರಲ್ಲಿ ಬಂದು ಇಡ್ಲಿ ಹಿಟ್ಟು ರುಬ್ಬೋ ಹಂಗೆ ಮಾಡ್ತೀಯಲಲೇ.. ನಿನಗೆ ನಮ್ಮ ಮೇಲೆ ಸಿಟ್ಟು ಇದ್ದಿದ್ರೆ ಊರಿಗೆ ಬಂದಮೇಲೆ ಹೆಂಗಾದ್ರೂ ತೀರಿಸ್ಕೊಬಹುದಾಗಿತ್ತಲಲೇ. ಇಂಥಾ ಸೀನೆಲ್ಲಾ ಬೇಕಾಗಿತ್ತಾ ನಮಿಗೆ.. " ಅಂತ ನಾನು, ಪಿನ್ನಿ ಅವನಿಗೆ ಬಯ್ಯಕ್ಕೆ ಶುರು ಮಡಿದ್ವಿ. ಅದಕ್ಕೆ ಸುನಿಲ "ಅದಿಕ್ಯಾಕೆ ಇಷ್ಟೊಂದ್ ತಲೆ ಕೆಡಿಸ್ಕೋತೀರಲೇ.. ಎನಾದ್ರು ದುಡ್ಡು ಕಡಿಮೆ ಬಿದ್ರೆ, ಡ್ರೈವರ್ ಹತ್ರ ಸಾಲ ತೊಗೊಂಡ್ರೆ ಆಯ್ತು.." ಅಂದುಬಿಟ್ಟ. ಇದನ್ನೆಲ್ಲಾ ಗಮನಿಸುತಿದ್ದ ಡ್ರೈವರ್ "ಸಾರ್..ನನಿಗೆ ಒಂದೇ ಇಡ್ಲಿ ಸಾಕು..ಹೊರಗಡೆ ಸಿಗರೇಟ್ ತೊಗೊತಾ ಇರ್ತೀನಿ.. " ಅಂತ ಜಾಗ ಖಾಲಿ ಮಾಡಿದ. ಈಗ ನಾವು ಉಳಿದಿದ್ದು ಬರಿ ಮೂರೇ ಜನ. ಆಮೇಲೆ ಹೋಟೆಲ್ ಮಾಣಿನ ಕರೆದು ಒಂದು ಇಡ್ಲಿಗೆ 14 ರುಪಾಯಿ ಅಂತ ತಿಳಿದುಕೊಂಡು, ಮೊಬೈಲ್ ಕ್ಯಾಲ್ಕ್ಯುಲೇಟರ್‌ನಲ್ಲಿ ಒಟ್ಟು ಬಿಲ್ಲ್ ಎಷ್ಟು ಲೆಕ್ಕಾ ಹಾಕಿದ್ವಿ. (ನಮಿಗೇನು ಬಾಯಲ್ಲಿ ಲೆಕ್ಕಾ ಮಾಡಕ್ಕೆ ಬರಲ್ಲಾ ಅಂತ ಅಲ್ಲ, ಸುಮ್ನೆ ಟೆಕ್ನಾಲಜಿ ಬಳಸೋಣ ಅಂತ ಮೊಬೈಲ್ ಉಪಿಯೋಗಿಸಿದ್ವಿ. ಒಂದು ರುಪಾಯಿ ಕಡಿಮೆ ಅದ್ರೂ ಆಮೇಲೆ ಹಿಟ್ಟು ರುಬ್ಬಬೇಕಲ್ಲಾ ಅದಕ್ಕೆ). ಸದ್ಯ ಪಿನ್ನಿ ಹತ್ರ ದುಡ್ದು ಸರಿಯಾಗಿ ಇತ್ತು. ಬಿಲ್ಲ್ ಕೊಡುವಾಗ ಸಮೀಪದಲ್ಲಿರಿವ ಎ.ಟಿ.ಮ್ ಬಗ್ಗೆ ವಿಚಾರಿಸಿದ್ವಿ. "ನನ್ನ ಮಕ್ಳಾ.. ಹೊಸ ಕಾರಿನಲ್ಲಿ ಕರಕೊಂಡು ಬಂದ್ರೆ ಇಷ್ಟೊಂದು ಬೈತೀರಾ.. ನಿಮ್ಮ ಋಣ ನನಿಗೆ ಬೇಡವೇ ಬೇಡ, ನಿಮ್ಮ ದುಡ್ಡು ನೀವೇ ಇಟ್ಕೋಳಿ .." ಅಂತ ಗೊಣಗುತ್ತಾ ಸುನಿಲ ನಮಿಗೆ ದುಡ್ಡು ವಾಪಸ್ ಮಾಡಿದ.
ಕಾರು ದಾವಣಗೆರೆ ಕಡೆಗೆ ವೇಗವಾಗಿ ಹೊರಟಿತು. ಕಾರಿನ ವೇಗ ಹೆಚ್ಚುತ್ತಿದ್ದಂತೆ ದೇಹ ನಿದ್ರೆಯ ಕೊಡೆಗೂ ಮತ್ತು ಮನಸ್ಸು ಕನಸಿನ ಕಡೆಗೂ ಹೊರಳಿತು...