ಬಹುಶಃ 2010 ಡಿಸೆಂಬರ್ 26 ಅನ್ಸುತ್ತೆ. ಸರಿಯಾಗಿ ದಿನಾಂಕ ನೆನಪಿಲ್ಲ. ಕೊರಿಯಾದ ಸಿಯೋಲ್ನಲ್ಲಿ ಮೈ ಕೊರೆಯುವ ಚಳಿ. -೧೫ಡಿಗ್ರಿ ಉಷ್ಣಾಂಶ. ಭಯಂಕರ ಚಳಿ ಚರ್ಮ ದಾಟಿ ಮೂಳೆಗೆ ತಾಕುತ್ತಾ ಇತ್ತು. ಆದ್ರೆ ರಾಜಾ ದಿನ, ಎಲ್ಲಿಗೆ ಹೋಗಬಹುದು ಅಂತ ನಾನು, ಸುನಿಲ್ ಬಾಗೆ ಮತ್ತೆ ಶ್ರೀನಿ ಘಾಡವಾದ ಚಿಂತನೆ ನಡೆಸಿದ್ವಿ. ಕೊನೆಗೆ ಎಲ್ಲೋ ಸುತ್ತಾಡಿ ಬರೋಣ ಅಂತ ತಯಾರದ್ವಿ. ನಾನು ನನ್ನಷ್ಟೇ ತೂಕದ ಬಟ್ಟೆ ಧರಿಸಿ ಸಾಕಪ್ಪ ಈ ಚಳಿ ಸಹವಾಸ ಅಂತ ಬೈಕೊಂಡು ಹೊರಟೆ. ಮೊದಲು ಒಂದು ಬನಿಯನ್, ಅದರಮೇಲೆ ಎರಡು ಟಿ-ಶರ್ಟ್, ಅದರಮೇಲೆ ಒಂದು ಸ್ವೆಟರ್, ಅದರಮೇಲೆ ಎರಡು ಪದರದ ಜರ್ಕಿನ್. ಮುಖಕ್ಕೆ ಒಂದು ಉಣ್ಣೆಯ ಮಫ್ಲರ್. ತಲೆ ಮೇಲೆ ಒಂದು ಉಣ್ಣೆ ಟೋಪಿ. ಅಬ್ಬಬ್ಬಾ ನಿಮಿಗೆ ಓದಕ್ಕೇ ಇಷ್ಟು ಕಷ್ಟ ಆದ್ರೆ ನನಗೆ ಇಷ್ಟೆಲ್ಲಾ ಹಾಕ್ಕೊಂಡು ಹೆಂಗಾಗಿರಬೇಡ?
ಈಗ ವಿಷಯಕ್ಕೆ ಬರ್‍ತೀನಿ. ಸರಿ ನಾವು 3 ಜನ ಹೊರಟ್ವಿ. ದಾರಿನಲ್ಲಿ ಸುನಿಲ್ ಬಾಗೆ ತಿನ್ನಕ್ಕೆ ಏನೋ ತರ್ತೀನಿ ಅಂತ ದೊಡ್ಡ ಮಾಲ್ ಒಳಗೆ ಹೋದ. ಆಗ ನಾನು ಶ್ರೀನಿ ಹೊರಗೇ ಕಾಯೋಣ ಅಂತ ನಿರ್ಧರಿಸಿ ಮಾಲ್ ಹೊರಗೆ ಇರೋ ಒಂದು ಕಲ್ಲಿನ ಬೆಂಚ್ ಮೇಲೆ ಕೂತ್ಕೊಂಡ್ವಿ. ತುಂಬಾ ಚಳಿ ಇದ್ದಿದ್ರಿಂದ ನಾವು ತಲೆ ಕೆಳಗೆ ಮಾಡಿ ಕಿವಿನ ಕೈಗಳಿಂದ ಮುಚ್ಕೊಂಡು ಕೂತಿದ್ವಿ. ಇಷ್ಟೊತ್ತಾದ್ರೂ ಬರ್ಲಿಲ್ಲ ಸುನಿಲ್ ಬಾಗೆ ಅಂತ ಬೈಕೋತಾಇದ್ವಿ. ಕೂತಲ್ಲೇ ಹಂಗೇ ನಿದ್ದೆ ಮಂಪರು ಹತ್ತುತ್ತಾ ಇತ್ತು.
ಯಾರೋ ಎಬ್ಬಿಸಿದ್ರು. ತಲೆ ಎತ್ತಿ ನೋಡಿದ್ವಿ. ಕಣ್ಣೆದ್ರಿಗೆ ಕಿತ್ತಳೆ ಹಣ್ಣು ಇತ್ತು. ನಮ್ಮ ಕೈಗೆ ಕಿತ್ತಳೆ ಹಣ್ಣುಗಳು ಬಂತು. ನಾವು ಸೇಮ್ ಭಿಕ್ಷುಕರ ರೀತಿಯಲ್ಲಿ ಕಿತ್ತಳೆ ಹಣ್ಣುಗಳನ್ನ ಇಸ್ಕೊಂಡಿದ್ವಿ. ನಮಗೆ ನಿದ್ದೆ ಕಣ್ಣಲ್ಲಿ ಏನಾಗ್ತಾ ಇದೆ ಅನ್ನೋದು ಗೊತ್ತಗಲೇ ಇಲ್ಲ.ಏನಾಗ್ತಾ ಇದೆ ಅನ್ನೋದು ಒಂದು ಕ್ಷಣ ಆದಮೇಲೆ ತಿಳೀತು. ಇದ್ದಕಿದ್ದ ಹಾಗೆ ಒಂದು ಅಜ್ಜಿ ಬಂದು ನಾವಿಬ್ಬರೂ ಕೂತಿರೋ ಪೋಸ್ ನೋಡಿ ನಮ್ಮನ್ನು ಭಿಕ್ಷುಕರೆಂದು ತಿಳಿದು ನಬ್ಬಿಬ್ಬರಿಗೂ 6 ಕಿತ್ತಳೆ ಹಣ್ಣು ಕೊಟ್ಟು ನಗುತ್ತಾ ನಗುತ್ತಾ ಹೋಯ್ತು. ನಾನು, ಶ್ರೀನಿ ಇಬ್ಬರೂ ಮುಖ ಮುಖ ನೋಡಿ ಏನು ಮಾಡೋದು ಗೊತ್ತಾಗದಲೆ ಜೋರಾಗಿ ನಗು ಬಂತು.
ಅಷ್ಟೊತ್ತಿಗೆ ಆ ಅಜ್ಜಿ ನಿಧಾನಕ್ಕೆ ನಡೆದು ಒಂದಷ್ಟು ದೂರ ಹೋಗಿತ್ತು. ನಾವಿಬ್ಬರೂ ಅಜ್ಜಿ ಹತ್ರ ಹೋಗಿ "ನಾವು ಭಿಕ್ಷುಕರಲ್ಲ" ಅಂತ ಹೇಳೋಕೆ ಹೊರಟ್ವಿ. ಆದ್ರೆ ಭಾಷೆ ಗೊತ್ತಿಲ್ಲದ ಊರು ನೋಡಿ ಎಲ್ಲಾ ಉಲ್ಟಾ ಹೊಡೀತು. ಆ ಅಜ್ಜಿ ನಾವಿನ್ನೂ ಜಾಸ್ತಿ ಕಿತ್ತಳೆ ಹಣ್ಣು ಕೇಳ್ತಾ ಇದೀವಿ ಅಂತ ಅರ್ಥ ಮಾಡಿಕೊಂಡು ನಗುತ್ತಾ ಇನ್ನೂ ಹೆಚ್ಚು ಕಿತ್ತಳೆ ಹಣ್ಣು ಕೊಡಕ್ಕೆ ಬಂತು. ಓ ಇದ್ಯಾಕೋ ಸರಿ ಹೋಗ್ತಾ ಇಲ್ಲ ಅಂತ ನಾವು ಏನೂ ಮರು ಮಾತಾಡದೆ ಸುಮ್ನೆ ಬಂದ್ವಿ. ಅಷ್ತೊತ್ತಿಗೆ ಬಾಗೆ ಮಾಲ್ ಇಂದ ಬಂದು ನಮಿಗೆ ಕಾಯುತ್ತಾ ಇದ್ದ. ಈ ವಿಷಯ ಕೇಳಿ ಬಿದ್ದು ಬಿದ್ದು ನಗಕ್ಕೆ ಶುರುಮಾಡಿದ. ನಾನು ಮತ್ತೆ ಶ್ರೀನಿ ಇಂಗು ತಿಂದ ಮಂಗನ ಹಾಗೆ ಆಗಿದ್ವಿ. ಹೀಗೆ ನಗುತ್ತಾ ಸಾಗಿತ್ತು ನಮ್ಮ ಪಯಣ.
ಇಂತಿ ನಿಮ್ಮ,
ದತ್ತ
ತುಂಬಾ ಚೆನ್ನಾಗಿದೆ
ReplyDelete